ನಿನ್ನೆ....
ಇದು ಬರಿ ಕನಸಲ್ಲ
ಕನಸಿನಲ್ಲಿನ ನನಸು
ಹಂಪೆಯ ಆ ಮತಂಗ ಪರ್ವತವನೇರಿ
ಉತ್ತರದ ಕಡೆಗೊಮ್ಮೆ ಮೊಗದಿರುಹಿದೆ
ಮುಂಬೆಳಗಿನ ಸಮಯ
ಅಬ್ಬಬ್ಬ....
ಅದು ಮನಕೆ ತಂಪೆರೆವ
ಉಷೆಯ ಲಾಸ್ಯವಾಗಿರಲಿಲ್ಲ
ಬರ ಚಂಡಿಯ ಚಂಡತಾಂಡವ
ಹರಡುತ್ತಿದ್ದುದು, ಮುದವೀವ ಮುಂಬೆಳಗಲ್ಲ
ಹಿಂಡು ಚಂಡೆಗಳ ಭೀಕರ
ನಾದಾನುರಣನ...
ಅಯ್ಯಯ್ಯೋ....
ಹಸುಗೂಸು ಎಳೆಗೂಸುಗಳ ಹೊತ್ತು
ಆ ಜನ ಹುಟ್ಟಿ ಬೆಳೆದ ಮನೆಕೇರಿ ಬಿಟ್ಟು
ನೀರು ನೆರಳನು ಅರಸಿ
ಹಿಡಿಕೂಳು ಬಯಸಿ
ಹಿಂಡು ಹಿಂಡಾಗಿ ದಿಕ್ಕು ಕಂಡಕಡೆ
ಕಾಲನೆಳೆದೆಳೆದು ಮುಂಬರಿವ ದೃಶ್ಯ
ಹಕ್ಕಿಗಳೋ...
ಆಕ್ರಂದನವಗೈಯುತ್ತ
ಗೂಡಲಿಹ ಮರಿಗಳನು ಬಿಟ್ಟಗಲಲಾರದೆ
ತುಯ್ಯಾಡಿ ತುಯ್ಯಾಡಿ ಕೊನೆಗೆ
ತಮ್ಮ ಉಳಿವನೆ ಬಯಸಿ
ನೀರು ನೆರಳನು ಅರಸಿ ಧಾವಿಸುವ ದೃಶ್ಯ
ಪಾಪ...
ಪ್ರಾಣಿಗಳು ತಮ್ಮ ಕಂದಮ್ಮಗಳ ತಳ್ಳುತ್ತ
ಹಿಡಿಮೇವ ಹನಿನೀರ ಹುಡುಕುತ್ತ
ಕಾಲೊಯ್ದಕಡೆ ಓಡುತಿಹ ದೃಶ್ಯ
ಓ ಅಲ್ಲಿ...ಅಮ್ಮಮ್ಮ...ನೋಡಲಾರೆ
ಆ ಗಿಡ ಮರ ಬಳ್ಳಿ ಗುಲ್ಮ ತೃಣ
ಅವು ಎಲ್ಲಿಗೋಡಬೇಕು?
ಅವುಗಳಿಗೆ ಬೇಡವೇ ನೀರು ನೆರಳು ಕೂಳು
ಓ ಪ್ರಕೃತಿ ನೀನೆಷ್ಟು ಕ್ರೂರಿ! ದಯರಹಿತೆ!
ನೀನೆಂತಹ ದ್ವಂದ್ವೆ?
ಒಂದು ವರ್ಗಕ್ಕೆ ಬೆಣ್ಣೆ
ಒಂದು ವರ್ಗಕ್ಕೆ ಸುಣ್ಣ
ಜನಕೆ ಪ್ರಾಣಿಗೆ ಕಾಲ್ಗಳನು ಕೊಟ್ಟೆ
ಹಕ್ಕಿಗೆ ರೆಕ್ಕೆ
ಆ ಗಿಡ ಮರಬಳ್ಳಿ ತೃಣಕೇಕೆ ಕೊಡಲಿಲ್ಲ
ಕೊಟ್ಟಿದ್ದರೆ ನೀರು ನೆರಳನು ಅರಸಿ
ಎಲ್ಲಿಗೋ ಹೋಗಿ ಬದುಕುತ್ತಿದ್ದವು
ಏನೆಂದೆ ?
ಭೂಮಿಯಡಿ ನೀರಿಹುದು ಆಗಸದಿ ವಾಯು
ಎಂದೆಯಾ ?
ಓ ಪ್ರಕೃತಿ ..ನಿಲ್ಲು...ತಿರುಗುತ್ತ
ಗೊತ್ತಿಲ್ಲವೆ...ಕೇಳಿಲ್ಲಿ
ಈ ಕ್ರೂರಿ ಮಾನವ ತನ್ನ ಸ್ವಾರ್ಥಕ್ಕಾಗಿ
ಎಲ್ಲೆಲ್ಲು ರಿಗ್ಗನ್ನು ಹಾಕಿ
ನೀರನೆತ್ತುತಿಹನು...
ಭೂಮಿಯೊಳಗಣ ಜಲಧಾರೆ ತುಂಡಾಗಿ
ವರುಷಗಳೇ ಸಂದು ಹೋಗಿವೆ,ತಾಯಿ
ನಿನ್ನೆ..ಅರವತ್ತು ಅಡಿಯಿಂದ ನೀರನೆತ್ತಿದನು
ಇಂದು ಆರ್ನೂರು ಅಡಿ ಎನ್ನುತಿಹನು
ನಾಳೆ ಆರು ಸಾವಿರ ನಾಡಿದ್ದು ಲಕ್ಷ
ಆಚೆ ನಾಡಿದ್ದು ಕೋಟಿ
ನೋಡುತಿರು..ತಾಯಿ..ನೋಡುತಿರು
ಒಂದು ದಿನ ಈ ಸ್ವಾರ್ಥಿ
ಪಾತಾಳಕ್ಕೂ ರಿಗ್ಗನ್ನು ಹಾಕಿ ಬರಿದು ಮಾಡುವನು
ಆದರೇನಂತೆ....ಓ ಪ್ರಕೃತಿ
ನೀನು ಕ್ಷಯೆಯಲ್ಲ ಅಕ್ಷಯೆ
ನೀ, ತಾಯಿ ವಾತ್ಸಲ್ಯಮಯಿ
ಬೇಡಿಕೊಂಬೆನು ತಾಯಿ
ಬೇಗ ಮಳೆಹನಿ ಹನಿಸು
ಜನಕಾಗಿ ಅಲ್ಲ....ಹಕ್ಕಿ ಪ್ರಾಣಿಗೂ ಅಲ್ಲ...
ಕಾಲಿಲ್ಲದ ಬಾಯಿಯಿಲ್ಲದ
ಬಾಯಾರಿ ಬಸವಳಿದ
ಆ ಅಚರ ಚೇತನಕಾಗಿ...
ಆ ಮರಗಿಡ ಬಳ್ಳಿ ತೃಣಕಾಗಿ
ವನವಿದ್ದಲ್ಲಿ...ಚೇತನವಿಹುದು
ಜನ ಹಕ್ಕಿ ಪ್ರಾಣಿ
ಓ ತಾಯಿ ಕೃಪೆದೋರು
ಬೇಗ ಮಳೆಹನಿ ಹನಿಸು
ರಚನೆ : ಕೂಡಲಿ ಜಗನ್ನಾಥಶಾಸ್ತ್ರಿ
No comments:
Post a Comment